ಚಟರ್ಜಿ, ಸುನೀತಿ ಕುಮಾರ

 1890-. ಬಂಗಾಳೀ ಸಾಹಿತ್ಯ ಸಂಸ್ಕøತಿಗಳಲ್ಲದೆ ಭಾಷಾಶಾಸ್ತ್ರ ಮತ್ತು ಅನೇಕ ಭಾಷೆಗಳ ಮೇಲೆ ಪ್ರಭುತ್ವ ಪಡೆದಿರುವ ಇವರು ಅಂತರರಾಷ್ಟ್ರೀಯ ವಿಖ್ಯಾತಿಯನ್ನು ಗಳಿಸಿರುವ ಭಾರತೀಯ ವಿದ್ವಾಂಸರು.  ಇವರು ಕಲ್ಕತ್ತೆಯ ಶಿವಪುರದಲ್ಲಿ ಜನಿಸಿದರು.  ಇವರದ್ದು ಹತ್ತಾರು ತಲೆಮಾರಿನಿಂದ ವೈದುಷ್ಯಕ್ಕೆ ಹೆಸರಾದ ಬ್ರಾಹ್ಮಣವಂಶ (ಸಾಮವೇದ, ಕಾಶ್ಯಪಗೋತ್ರ).  ಮಹಾರಾಜ ಬಲ್ಲಾಳಸೇನ (1158-1179) ಇವರ ಪೂರ್ವ ವಂಶೀಯರೊಬ್ಬರಿಗೆ ಚತುತಿ ಎಂಬ ಗ್ರಾಮವನ್ನು ದಾನ ಮಾಡಿ ಮನ್ನಣೆಯಿತ್ತ ದಾಖಲೆಯಿದೆ. ಇವರ ತಂದೆ ಬಾಬು ಹರಿದಾಸ ಚಟರ್ಜಿ ; ನಾಲ್ಕು ಜನ ಸಹೋದರರಲ್ಲಿ ಇವರು ಎರಡನೆಯವರು.  ಇವರ ವಿದ್ಯಾರ್ಥಿದಶೆಯೆಲ್ಲ ಕಲ್ಕತ್ತ ನಗರದಲ್ಲಿ ಕಳೆಯಿತು.  ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪರೀಕ್ಷೆಯಲ್ಲಿ ಪ್ರಥಮವರ್ಗದಲ್ಲಿ ತೇರ್ಗಡೆಯಾಗಿ ಅನಂತರ ಇವರು ಲಂಡನ್ ವಿಶ್ವವಿದ್ಯಾಲಯದಲ್ಲಿ ಧ್ವನಿಶಾಸ್ತ್ರದಲ್ಲಿ ವಿಶೇಷ ಪ್ರಾವಿಣ್ಯ ಪಡೆದು ಡಿ.ಲಿಟ್. ಪದವಿಗಳಿಸಿದರು. ಅಲ್ಲಿ ಡೇನಿಯಲ್ ಜೋನ್ಸ್, ಎಫ್. ಡಬ್ಲ್ಯು, ತಾಮಸ್, ಎಲ್.ಡಿ. ಬಾರ್ನೆಟ್ ಮುಂತಾದ ಪ್ರಾಚ್ಯ ಭಾಷಾ ಪಂಡಿತರೊಂದಿಗೆ ಸಂಶೋಧನೆಗಳಲ್ಲಿ ಆಸಕ್ತರಾದರು. ಪ್ಯಾರಿಸ್ ನಗರದಲ್ಲಿಯೂ ಕೆಲವು ಕಾಲ ಇದ್ದು ಫ್ರೆಂಚ್ ವಿದ್ವಾಂಸರ ಗೌರವವನ್ನು ಪಡೆದರು.  1922ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಖೈರ ಭಾಷಾಶಾಸ್ತ್ರ ಪೀಠದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು.  ಇವರ ಸಂಶೋಧನೆಯ ಉದ್ಗ್ರಂಥ-ಬಂಗಾಳ ಭಾಷೆಯ ಉತ್ಪತ್ತಿ ಮತ್ತು ವಿಕಾಸ (1300 ಪುಟ) ಎಂಬುದು 1926ರಲ್ಲಿ ಪ್ರಕಟವಾಯಿತು.  1927ರಲ್ಲಿ ರವೀಂದ್ರನಾಥ ಠಾಕೂರರ ಪರಿವಾರದವರಾಗಿ ಮಲಯ, ಸುಮಾತ್ರ, ಜಾವ, ಬಾಲಿ, ಸಯಾಂ ಮುಂತಾದ ದೇಶಗಳಲ್ಲಿ ಪ್ರವಾಸಮಾಡಿ ಅಲ್ಲೆಲ್ಲ ಭಾರತೀಯ ಕಲೆ ಸಂಸ್ಕøತಿಯನ್ನು ಕುರಿತು ಭಾಷಣಮಾಡಿ ಬಂದರು.  1935ರಲ್ಲಿ ಯೂರೋಪನ್ನು ಸಂಚರಿಸಿ ವಿದ್ವತ್ಸಭೆಗಳಲ್ಲಿ ಭಾಗವಹಿಸಿ ಜರ್ಮನಿಯ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸವಿತ್ತರು.  1936ರಲ್ಲಿ ಬರ್ಮ, ಯೂರೋಪು ಹಾಗೂ ಅಮೆರಿಕ ಯಾತ್ರೆಗಳು ಒದಗಿದವು.  ಇಂಡೋ ಆರ್ಯನ್ ಭಾಷಾವರ್ಗ ಮತ್ತು ಹಿಂದಿ ; ಭಾರತೀಯ ಭಾಷಾಸಮಸ್ಯೆ ಮುಂತಾದ ಗ್ರಂಥಗಳು ಪ್ರಕಟವಾದವು.  ಬಂಗಾಳೀ ಸಾಹಿತ್ಯದಲ್ಲೂ ಇವರು ಉತ್ತಮ ಗದ್ಯಕಾರರೆಂದು ಹೆಸರಾಗಿದ್ದಾರೆ.  ವಂಗೀಯ ಸಾಹಿತ್ಯ ಪರಿಷತ್, ಕಲ್ಕತ್ತ ; ನಾಗರೀ ಪ್ರಚಾರಿಣೀ ಸಭಾ, ಕಾಶೀ ; ಭಾಂಡಾರಕರ್ ಸಂಶೋಧನ ಸಂಸ್ಥೆ, ಪುಣೆ-ಇತ್ಯಾದಿ ಭಾರತೀಯ ಸಂಶೋಧನ ಸಂಸ್ಥೆಗಳಲ್ಲೂ ಇವರಿಗೆ ಗೌರವದ ಸದಸ್ಯತ್ವವಿದೆ.  1954ರಲ್ಲಿ ಆಫ್ರಿಕಕ್ಕೂ 1955ರಲ್ಲಿ ಚೀನಕ್ಕೂ ಇವರು ಭೇಟಿ ನೀಡಿದ್ದಾರೆ.  ಭಾರತ ಸರ್ಕಾರ 1955ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿನೀಡಿದೆ.  ರವೀಂದ್ರನಾಥ ಠಾಕೂರರು ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯದ ಆಡಳಿತ ಸಮಿತಿಯಲ್ಲಿ ಇವರು ಆರಂಭದಿಂದಲೂ ಕೆಲಸ ಮಾಡಿದ್ದಾರೆ ; ಅಮೆರಿಕೆಯ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯ ಇವರನ್ನು ಗೌರವ ಪ್ರಾಧ್ಯಾಪಕರಾಗಿ ನೇಮಿಸಿತ್ತು.  ಠಾಕೂರರು ಇವರಿಗೆ ಭಾಷಾಚಾರ್ಯ ಎಂಬ ಬಿರುದನ್ನಿತ್ತಿದ್ದಾರೆ.

ಚಟರ್ಜಿಯವರು ಸ್ವತಂತ್ರ ಭಾರತದ ರಾಜಕಾರಣದಲ್ಲಿಯೂ ಇದ್ದು ಅಪಾರ ಸೇವೆ ಸಲ್ಲಿಸಿದ್ದಾರೆ.  ಭಾರತ ಸಂಸತ್ತಿನ ಸದಸ್ಯರಾಗಿ, ನಾನಾ ವಿಶ್ವವಿದ್ಯಾಲಯಗಳ ಸಂಶೋಧನ ಸಂಸ್ಥೆಗಳ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.  ಏಷ್ಯ, ಯೂರೋಪುಗಳ ಅನೇಕ ಭಾಷೆಗಳಲ್ಲಿ ಪ್ರಭುತ್ವ ಪಡೆದು ವಿಶ್ವಪರ್ಯಟನ ಮಾಡಿ ವಿಶ್ವವಿಖ್ಯಾತಿಯನ್ನು ಗಳಿಸಿ ನೂರಾರು ಸಂಶೋಧನ ಪ್ರಬಂಧಗಳಿಂದಲೂ ಪುಸ್ತಕರಚನೆಯಿಂದಲೂ ಭಾಷಣಕೌಶಲದಿಂದಲೂ ವಿಶ್ವದ ವಿದ್ವನ್ಮಂಡಲಿಯಲ್ಲಿಯೇ ತಮ್ಮದೊಂದು ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇಂಡಿಯನ್ ಲಿಂಗ್ವಿಸ್ಟಿಕ್ ಸೊಸೈಟಿ ಚಟರ್ಜಿಯವರ ಅರವತ್ತನೆಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಚಟರ್ಜಿ ಗೌರವ ಗ್ರಂಥವೊಂದನ್ನು ಪ್ರಕಟಿಸಿದೆ (1955).
(ಕೆ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ